ವೆಂಕಣ್ಣಯ್ಯ, ಟಿ ಎಸ್
	1885-1939. ಹೊಸಗನ್ನಡ ಸಾಹಿತ್ಯದ ಅಶ್ವಿನೀ ದೇವತೆಗಳಲ್ಲಿ ಒಬ್ಬರೆಂದು ಖ್ಯಾತರಾಗಿದ್ದ ವಿದ್ವಾಂಸರು. ಮೈಸೂರು ವಿಶ್ವವಿದ್ಯಾನಿಲಯದ ಮೊದಲ ಕನ್ನಡ ಪ್ರಾಧ್ಯಾಪಕರು. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ತಳುಕು ಗ್ರಾಮದಲ್ಲಿ 1885 ಅಕ್ಟೋಬರ್ 1ರಂದು ಜನಿಸಿದರು. ಕನ್ನಡದ ಆಶುಕವಿಗಳೂ ನಾಟಕ ಕಾರರೂ ಆಗಿದ್ದ ಸುಬ್ಬಣ್ಣನವರು ಇವರ ತಂದೆ; ಪ್ರಾಚೀನ ಕಾವ್ಯಗಳನ್ನು ಸುಶ್ರಾವ್ಯವಾಗಿ ಹಾಡಿ, ಅರ್ಥ ಹೇಳಬಲ್ಲವರಾಗಿದ್ದ ಲಕ್ಷ್ಮೀದೇವಮ್ಮ ಇವರ ತಾಯಿ. ಇಂಥ ಸುಸಂಸ್ಕøತ ವಾತಾವರಣದಲ್ಲಿ ಬೆಳೆದ ವೆಂಕಣ್ಣಯ್ಯ ನವರು ಹುಟ್ಟೂರಿನ ಶಾಲೆಯಲ್ಲಿ ಓದಿ ಲೋಯರ್ ಸೆಕೆಂಡರಿ ಪರೀಕ್ಷೆ ಯನ್ನೂ ಚಿತ್ರದುರ್ಗದ ಪ್ರೌಢಶಾಲೆಯಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನೂ ಮುಗಿಸಿ, ಎಫ್.ಎ. ಪರೀಕ್ಷೆಗೆ ಓದಲೆಂದು 1904ರಲ್ಲಿ ಮೈಸೂರಿಗೆ ಬಂದರು. ಮೊದಲನೆಯ ವರ್ಷದ ಪರೀಕ್ಷೆಯನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿಯೂ ಕಡೆಯ ವರ್ಷದ ಪರೀಕ್ಷೆಯನ್ನು ಬಳ್ಳಾರಿಯಲ್ಲಿದ್ದ ವಾಡ್ರ್ಲಾ ಕಾಲೇಜಿನಲ್ಲಿಯೂ ಮುಗಿಸಿ, 1906ರಲ್ಲಿ ಮತ್ತೆ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಚರಿತ್ರೆ, ಅರ್ಥಶಾಸ್ತ್ರಗಳನ್ನು ವಿಶೇಷ ವಿಷಯಗಳನ್ನಾಗಿ ಓದಿ 1909ರಲ್ಲಿ ಬಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅನಂತರ ಎಲ್‍ಎಲ್.ಬಿ. ಪರೀಕ್ಷೆಗೆ ಓದಲೆಂದು ಮುಂಬಯಿಗೆ ಹೋದ ಇವರು ಅಲ್ಲಿಯ ಅಂಚೆ ಇಲಾಖೆಯಲ್ಲಿ ಗುಮಾಸ್ತರಾಗಿದ್ದುಕೊಂಡು, ಮೊದಲ ಪರೀಕ್ಷೆಯನ್ನು ಮುಗಿಸಿ, ಎರಡನೆಯ ಪರೀಕ್ಷೆಗೆ ಓದುತ್ತಿದ್ದಾಗ ಕನ್ನಡ ಎಂ.ಎ. ಓದಬೇಕೆಂಬ ಸಂಕಲ್ಪದಿಂದ ಮೈಸೂರಿಗೆ ಹಿಂದಿರುಗಿದರು. ಕೆಲಕಾಲ ಧಾರವಾಡದ ಮಿಷನ್ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿದ್ದ ಇವರು 1914ರಲ್ಲಿ ಎಂ.ಎ. ಪದವಿಯನ್ನು ಪಡೆದ ಮೇಲೆ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸ್ವಲ್ಪಕಾಲ ಅಧ್ಯಾಪಕರಾಗಿದ್ದರು. 1917ರಲ್ಲಿ ದೊಡ್ಡಬಳ್ಳಾಪುರದ ಕನ್ನಡ ಹೈಸ್ಕೂಲಿನ ಮುಖ್ಯೋಪಾಧ್ಯಾಯ ರಾಗಿದ್ದು 1918ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾದರು. ಕ್ರಮೇಣ ಅಲ್ಲಿಯೇ ಉಪಪ್ರಾಧ್ಯಾಪಕರಾದರು. 1927ರಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನೇಮಕಗೊಂಡ ಇವರು ಕನ್ನಡ ಇಲಾಖೆಯನ್ನು ವಿಶ್ವವಿದ್ಯಾಲಯದ ಮಟ್ಟದಲ್ಲಿ ಕಟ್ಟಿ ಬೆಳೆಸುವಲ್ಲಿ ಹಲವು ಬಗೆಯಲ್ಲಿ ಶ್ರಮಿಸಿದರು.

	ಇವರ ವ್ಯಕ್ತಿತ್ವ ಬಹುಮುಖವಾದುದು. ಸುತ್ತಲಿರುವ ಜನರ ನಿಲುವಿಗಿಂತ ಎತ್ತರವಾಗಿ ಕಾಣಿಸುತ್ತಿದ್ದ ಇವರ ಶರೀರದ ನಿಲುವು, ಇವರ ಮನಸ್ಸು ಶೀಲಗಳ ನಿಲವೇ ಆಗಿತ್ತು. ಹೊಸಗನ್ನಡ ಸಾಹಿತ್ಯವನ್ನು ನೆಟ್ಟು ಬೆಳೆಸಬೇಕಾಗಿದ್ದ ಪರ್ವಕಾಲದಲ್ಲಿ ಇವರು ವಹಿಸಿದ ಪಾತ್ರ ಚಿರಸ್ಮರಣೀಯವಾದುದು. ಇವರ ಅಧ್ಯಾಪನದಲ್ಲಿ ವಿದ್ಯಾರ್ಥಿಗಳಾಗಿದ್ದ ವರು ಪ್ರಾಚೀನ ಸಾಹಿತ್ಯದ ಸಾರಸತ್ತ್ವವನ್ನು ಹೀರಿಕೊಳ್ಳುವ ಮತ್ತು ಆಗತಾನೆ ಕಣ್ತೆರೆಯುತ್ತಿದ್ದ ಆಧುನಿಕ ಸಾಹಿತ್ಯ ನವೋದಯದ ಉಷಃಕಾಂತಿಯಲ್ಲಿ ಬುದ್ಧಿಗೆ ಸಾಣೆಯನ್ನೂ ಹೃದಯಕ್ಕೆ ವಿಕಾಸವನ್ನೂ ಪಡೆದುಕೊಳ್ಳುವ ಸಾಧನೆಯಲ್ಲಿ ದೀಕ್ಷಾಬದ್ಧರಾದರು. ನಿಜವಾದ ಪ್ರತಿಭೆಯನ್ನು, ಅದು ಎಲ್ಲಿಯೆ ಇರಲಿ, ಯಾರಲ್ಲಿಯೇ ಇರಲಿ, ಕಾಣುವ ವಿಶಾಲಬುದ್ಧಿಯೂ ಅದನ್ನು ಗುರುತಿಸುವ ಔದಾರ್ಯವೂ ಇವರಿಗೆ ಇದ್ದುದರಿಂದ ಇವರ ವಿದ್ಯಾರ್ಥಿವೃಂದ ಆಧುನಿಕ ಕನ್ನಡ ಸಾಹಿತ್ಯದ ಪ್ರಚಾರ, ಪ್ರಸಾರಗಳಲ್ಲಿ ಅದ್ವೀತಿಯ ಪಾತ್ರವಹಿಸಲು ಸಾಧ್ಯವಾಯಿತು. ಜನರ ಯೋಗ್ಯತೆ, ಸಾಮಥ್ರ್ಯ, ದೌರ್ಬಲ್ಯಗಳನ್ನು ಅರ್ಥ ಮಾಡಿಕೊಳ್ಳಬಲ್ಲ ವರಾಗಿದ್ದ ಇವರು ಪ್ರೀತಿ, ವಿನೋದ, ಸಹಾಯ, ಸೌಜನ್ಯಾದಿಗಳಿಂದ ಜನರನ್ನು ಒಲಿಸಿಕೊಂಡು, ಕನ್ನಡದ ಕೆಲಸಗಳು ಸರಾಗವಾಗಿ ನಡೆಯು ವಂತೆ ನೋಡಿಕೊಂಡರು. ಇವರು ತರ್ಕ, ವ್ಯಾಜ್ಯ, ಪ್ರತಿಭಟನೆಗಳಲ್ಲಿ ಎಂದೂ ಪ್ರವೇಶಿಸದೆ ಪ್ರಶಾಂತಮನಸ್ಕರಾಗಿರುತ್ತಿದ್ದರು. ಸತ್ಸಂಗ, ಆತ್ಮವಿಮರ್ಶೆ, ಅಂತರ್ಮುಖತೆಗಳಿಂದ ಸುಸಂಸ್ಕøತರಾಗಿ ಸಾಧುಗಳಂತಿದ್ದರು. ಆದ್ದರಿಂದಲೇ ಇವರು ಆಗತಾನೆ ಅಂಕುರಿಸುತ್ತಿದ್ದ ಕನ್ನಡ ಸಾಹಿತ್ಯ ಪರಿಷತ್ತು, ಸೆಂಟ್ರಲ್ ಕಾಲೇಜು ಮತ್ತು ಮಹಾರಾಜ ಕಾಲೇಜುಗಳ ಕರ್ಣಾಟಕ ಸಂಘಗಳು, ಸುಪ್ರಸಿದ್ಧ ಕನ್ನಡ ತ್ರೈಮಾಸಿಕ ಪತ್ರಿಕೆಯಾದ ಪ್ರಬುದ್ಧ ಕರ್ಣಾಟಕ-ಇತ್ಯಾದಿ ಸಂಸ್ಥೆಗಳನ್ನೂ ಪತ್ರಿಕೆಗಳನ್ನೂ ಪೋಷಿಸಿ ಬೆಳೆಸುವುದರಲ್ಲಿಯೂ ಹೊಸಗನ್ನಡ ಸಾಹಿತ್ಯ ಸರ್ವತೋಮುಖವಾಗಿ ಹಬ್ಬಿಹರಡುವುದರಲ್ಲಿಯೂ ಅದ್ವಿತೀಯ ಪಾತ್ರ ವಹಿಸಲು ಸಾಧ್ಯವಾಯಿತು.

	ಇವರು ಕನ್ನಡದ ಜೊತೆಗೆ ತೆಲುಗು, ಇಂಗ್ಲಿಷ್, ಬಂಗಾಲಿ ಮತ್ತು ತಮಿಳು ಭಾಷಾ ಸಾಹಿತ್ಯಗಳಲ್ಲಿ ಆಳವಾದ ಪಾಂಡಿತ್ಯ ಗಳಿಸಿಕೊಂಡಿದ್ದರು. ಸಾಹಿತ್ಯ ಸೃಷ್ಟಿಗಿಂತ ಸಾಹಿತ್ಯ ಪ್ರಸಾರದ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದರಿಂದ ಇವರು ಸ್ವತಃ ರಚಿಸಿರುವ ಕೃತಿಗಳು ಸಂಖ್ಯಾದೃಷ್ಟಿಯಿಂದ ಕಡಿಮೆ ಎನಿಸಿದರೂ ಬೆಲೆಯುಳ್ಳ ಕೃತಿಗಳಾಗಿವೆ. ಇವರು ಶ್ರೀ ರಾಮಕೃಷ್ಣ ಮಠಕ್ಕಾಗಿ ಶ್ರೀ ರಾಮಕೃಷ್ಣ ಪರಮಹಂಸರ (ಎ.ಆರ್.ಕೃ. ಅವರೊಂದಿಗೆ) ಜೀವನ ಚರಿತ್ರೆಯನ್ನು ಬರೆದಿದ್ದಾರೆ. ಶ್ರೀ ರಾಮಕೃಷ್ಣ ಲೀಲಾ ಪ್ರಸಂಗದ ಒಂದು ಭಾಗವನ್ನು ಬಂಗಾಲಿಯಿಂದ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ರವೀಂದ್ರನಾಥ ಠಾಕೂರರು ಸಾಹಿತ್ಯ ವಿಷಯವಾಗಿ ಬರೆದ ಅನೇಕ ಪ್ರಬಂಧಗಳನ್ನು ಬಂಗಾಲಿಯಿಂದ ಭಾಷಾಂತರಿಸಿ ಪ್ರಾಚೀನ ಸಾಹಿತ್ಯವೆಂಬ ಹೆಸರಿನಿಂದ ಪ್ರಕಟಿಸಿದ್ದಾರೆ. ಹರಿಶ್ಚಂದ್ರ ಕಾವ್ಯಸಂಗ್ರಹ, ಕಾದಂಬರೀ ಸಂಗ್ರಹ, ಬಸವರಾಜ ದೇವರ ರಗಳೆ, ಸಿದ್ಧರಾಮ ಚರಿತ್ರೆಯ ಸಂಗ್ರಹ-ಇವು ಇವರ ಸಂಪಾದಿತ ಗ್ರಂಥಗಳು. ಕಾದಂಬರೀ ಸಂಗ್ರಹಕ್ಕೂ ಬಸವ ರಾಜ ದೇವರ ರಗಳೆಗೂ ಇವರು ಬರೆದಿರುವ ಮುನ್ನುಡಿಗಳು ಇವರ ತಲಸ್ಪರ್ಶಿಯಾದ ಪಾಂಡಿತ್ಯಕ್ಕೆ ಸಾಕ್ಷಿಯಾಗಿವೆ. ಮೈಸೂರು ವಿಶ್ವವಿದ್ಯಾನಿಲ ಯದಿಂದ ಪ್ರಕಟವಾಗಿರುವ ಕನ್ನಡ ಕೈಪಿಡಿಗೆ ಹಳಗನ್ನಡ ವ್ಯಾಕರಣ ಮತ್ತು ಭಾಷಾಚರಿತ್ರೆಯ ಭಾಗಗಳನ್ನು ಬರೆದಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಪಂಪ ಭಾರತ ಮತ್ತು ಪ್ರಾಚ್ಯ ಸಂಶೋಧನಾಲಯ ಪ್ರಕಟಿಸಿದ ಕುಮಾರವ್ಯಾಸಭಾರತ-ಇವುಗಳ ಸಂಪಾದನಾಕಾರ್ಯದಲ್ಲೂ ಇವರು ಮುಖ್ಯ ಪಾತ್ರವಹಿಸಿದ್ದರು.

	ಇವರು 1939 ಫೆಬ್ರವರಿ 24ರಂದು ನಿಧನರಾದರು. ಇವರ ನೆನಪಿಗಾಗಿ ಇವರ ವ್ಯಕ್ತಿತ್ವ ಮತ್ತು ಸಾಹಿತ್ಯವನ್ನು ಕುರಿತ ಸವಿನೆನಪು (ಸಂಪಾದಕರು: ಕುವೆಂಪು) ಎಂಬ ಸ್ಮರಣ ಗ್ರಂಥವನ್ನು 1970ರಲ್ಲಿ ಪ್ರಕಟಿಸಲಾಯಿತು. ಕುವೆಂಪು ಇವರ ವ್ಯಕ್ತಿತ್ವದಿಂದ ಅತ್ಯಂತ ಪ್ರಭಾವಿತರಾಗಿದ್ದು ಅಪೂರ್ವ ಗೌರವಾದರಗಳನ್ನು ಇವರ ಬಗೆಗೆ ತಾಳಿದ್ದರು. ಇದರ ಕುರುಹಾಗಿ ಶ್ರೀ ರಾಮಾಯಣದರ್ಶನಂ ಮಹಾಕಾವ್ಯವನ್ನು ವೆಂಕಣ್ಣಯ್ಯ ನವರಿಗೆ ಅರ್ಪಿಸಿದ್ದಾರೆ.
				
		(ಟಿ.ಎಸ್.ಎಸ್.)
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ